ಇಷ್ಟಿ-
ಒಂದು ವಿಧದ ಯಾಗ. ಸೂರ್ಯ ಸೋಮ ಇಂದ್ರ ಮೊದಲಾದ ದೇವತೆಗಳನ್ನು ಉದ್ದೇಶಿಸಿ ನಿರ್ದಿಷ್ಟ ಕಾಲಗಳಲ್ಲಿ ಮಂತ್ರಪೂರ್ವಕ ಹವಿಸ್ಸನ್ನು ಅಗ್ನಿಗೆ ಹಾಕುವುದು. ಅಗ್ನಿಗೆ ಹಾಕುವ ಹಾಲು ಮೊಸರು ತುಪ್ಪ ಅನ್ನ (ಚರು) ರೊಟ್ಟಿ (ಪುರೋಡಾಶ) ಇವೇ ಇಷ್ಟಿಯಲ್ಲಿ ಉಪಯೋಗಿಸುವ ಹವಿಸ್ಸುಗಳು. ವಿವಾಹದ ಬಳಿಕ ಆಧಾನಕ್ರಿಯೆಯಿಂದ ವೇದೋಕ್ತ ಕರ್ಮಗಳನ್ನು ಮಾಡುವುದಕ್ಕಾಗಿಯೇ ಸಿದ್ಧವಾದ ವೈಧಿಕಾಗ್ನಿಯನ್ನು ಯಾಗಗಳಲ್ಲಿ ಉಪಯೋಗಿಸಬೇಕು. ನಿತ್ಯ. ನೈಮಿತ್ತಿಕ, ಕಾಮ್ಯ ಎಂದು ಇಷ್ಟಿ ಮೂರು ಬಗೆ. ಯಾವ ವಿಧವಾದ ಫಲಾಪೇಕ್ಷೆಯೂ ಇಲ್ಲದೆ ತಪ್ಪದೇ ಮಾಡಬೇಕಾದುದು ನಿತ್ಯೇಷ್ಟಿ. ಅಮಾವಾಸ್ಯೆ ಮತ್ತು ಪೂರ್ಣಿಮೆ ದಿವಸಗಳಲ್ಲಿ ಮಾಡುವ ದರ್ಶಪೂರ್ಣಮಾಸೇಷ್ಟಿ ಮೊದಲಾದವು ಈ ವರ್ಗಕ್ಕೆ ಸೇರಿದವು. ನಿಮಿತ್ತವನ್ನು ಉದ್ದೇಶಿಸಿ ಮಾಡುವ ಇಷ್ಟಿ ನೈಮಿತ್ತಿಕೇಷ್ಟಿ. ಮಗ ಹುಟ್ಟಿದಾಗ, ಮನೆ ಬೆಂಕಿಯಿಂದ ಸುಟ್ಟಾಗ ಮಾಡುವಂಥವು ಮತ್ತು ಇಂಥವೇ ಕೆಲವು ನೈಮಿತ್ತಿಕೇಷ್ಟಿಗಳು. ಗೊತ್ತಾದ ಫಲವನ್ನು ಉದ್ದೇಶಿಸಿ ಕಾಮನೆಯಿಂದ ಮಾಡುವ ವೈಶ್ವಾನರೇಷ್ಟಿ, ಆಗ್ನಾವೈಷ್ಣವೇಷ್ಟಿ, ಕ್ಷಾಮವತೇಷ್ಟಿ, ಪುತ್ರಕಾಮ್ಯೇಷ್ಟಿ-ಮೊದಲಾದವು ಕಾಮ್ಯೇಷ್ಟಿಗಳು.

	ಆರಂಭ ದಿನದಲ್ಲೆ ಮುಗಿಸುವ ಇಷ್ಟಿಗೆ ಸದ್ಯಸ್ಕಾಲೇಷ್ಟಿ ಎಂದೂ ಮೊದಲಿನ ದಿನ ಪ್ರಾರಂಭಮಾಡಿ ಮಾರನೆಯ ದಿನ ಮುಗಿಸುವುದಕ್ಕೆ ದ್ವ್ಯಹಕಾಲೀನ ಇಷ್ಟಿ ಎಂದೂ ಹೆಸರು. ಈ ವಿಧಗಳಲ್ಲದೆ ಪ್ರಕೃತಿ ವಿಕೃತಿ ಎಂದು ಇಷ್ಟಿಗಳಲ್ಲಿ ಎರಡು ವಿಧ. ಇಷ್ಟಿ ಸಾಮಾನ್ಯದಲ್ಲೂ ಪ್ರಧಾನ ಮತ್ತು ಅಂಗ ಎಂದು ಎರಡು ವಿಧವಾದ ಕಾರ್ಯಗಳಿವೆ.

	ಪ್ರಧಾನ ಮತ್ತು ಅಂಗ ಈ ಎರಡನ್ನು ಒಳಗೊಂಡ ದರ್ಶಪೂರ್ಣಮಾಸೇಷ್ಟಿ ಪ್ರಕೃತಿ. ಉಳಿದ ಇಷ್ಟಿಗಳಲ್ಲಿ ಪ್ರಧಾನ ಮಾತ್ರ ಇರುತ್ತದೆ. ಇವು ವಿಕೃತೇಷ್ಟಿಗಳು. ಪ್ರಕೃತೇಷ್ಟಿಯಾದ ದರ್ಶಪೂರ್ಣಮಾಸೇಷ್ಟಿಯಲ್ಲಿ ಹೇಳಿರುವ ಅಂಗಗಳನ್ನೇ ವಿಕೃತೇಷ್ಟಿಗಳಲೆಲ್ಲ ಸ್ವೀಕರಿಸಬೇಕು ಎಂಬ ನಿಯಮವಿದೆ.									
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ